
25th April 2025
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,ಏ.24-ಕಲಾವಿದರ ಕುಟುಂಬದಲ್ಲಿ ಜನಿಸಿ ರಂಗಭೂಮಿಯಲ್ಲಿ ತನ್ನ ಪ್ರತಿಭೆ ತೋರಿಸಿ ಚಲನಚಿತ್ರದಲ್ಲಿ ಮಿಂಚಿ ದೇಶದ ಪ್ರತಿಷ್ಠಿತ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ಪುರಷ್ಕೃತ ಡಾ.ರಾಜ್ಕುಮಾರ ಕಲಾದೇವಿ ಆರಾಧಕರು ಎಂದು ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಡಾ.ರಾಜಕುಮಾರ ಅವರ 97ನೇ ಜನ್ಮದಿನಾಚರಣೆ ಹಾಗೂ ಡಾ.ರಾಜ್ ಗೀತೆಗಳ ಗಾಯನ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಿರಿವಂತ, ಬಡವ, ರಾಜ-ಮಹಾರಾಜರ ಪಾತ್ರಗಳಲ್ಲಿ ಅಭಿನಯಿಸಿ ಪಾತ್ರಗಳಿಗೆ ಜೀವ ತುಂಬುವ ಕಾರ್ಯ ಮಾಡಿದ ಡಾ.ರಾಜ್, ಅವರು ಕೇವಲ ಕಲಾವಿದನಾಗಿರಲಿಲ್ಲ. ಮಾನವೀಯತೆಯ ಮೌಲ್ಯಗಳುಳ್ಳ ವ್ಯಕ್ತಿಯಾಗಿದ್ದರು ಎಂದರು.
ಕನ್ನಡ ಭಾಷೆಗೆ ಪ್ರಾತಿನಿತ್ಯ ಕೊಡುವ ನಿಟ್ಟಿನಲ್ಲಿ ಗೋಕಾಕ್ ಚಳುವಳಿ ನಡೆಸುವಲ್ಲಿ ಪ್ರಮುಖರಾಗಿದ್ದರು. ತಮ್ಮ ಇಡೀ ಕಲಾ ಜೀವನದಲ್ಲಿ ಸರಳ ಹಾಗೂ ಆದರ್ಶ ವಿಷಯಗಳನ್ನೊಳಗೊಂಡ ಹಾಗೂ ಪ್ರೇಕ್ಷಕರಿಗೆ ಮಾರ್ಗದರ್ಶಿಯಾಗಬಲ್ಲ ಪಾತ್ರ ನಿರ್ವಹಿಸಿ ಎಲ್ಲರ ಆರಾದ್ಯ ಕಲಾವಿದರಾಗಿದ್ದರು ಎಂದು ಪಿ.ಎಚ್.ಪೂಜಾರ ಹೇಳಿದರು.
ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಮಾತನಾಡಿ, ರಾಜಕುಮಾರ ಕಲೆಯ ಜೊತೆಗೆ ಉತ್ತಮ ಹಾಡುಗಾರರಾಗಿದ್ದರು. ಅದ್ಬುತವಾದ ಕಂಠಸಿರಿಯಿAದ ಹಾಗೂ ಸ್ಪಷ್ಟ ಕನ್ನಡ ಶಬ್ದ ಪ್ರಯೋಗದಲ್ಲಿ ಪರಿಣಿತರಾಗಿದ್ದರು. ಇವರು ನಟಿಸಿದ ಪ್ರತಿಯೊಂದು ಚಿತ್ರಗಳು ಸಮಾಜಕ್ಕೊಂದು ಸಂದೇಶ ನೀಡುತ್ತಿದ್ದವು. ಆದ್ದರಿಂದ ರಾಜ್ಕುಮಾರ ಒಬ್ಬ ಮಾದರಿ ವ್ಯಕ್ತಿಯಾಗಿ ಎಲ್ಲರ ಮನದಲ್ಲಿ ನೆಲೆಯೂರಿದ್ದರು ಎಂದರು.
ಡಿಎಸ್ಪಿ ಮಂಜುನಾಥ ಗಂಗಲ್ ಮಾತನಾಡಿ, ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ರಾಜ್ಕುಮಾರ ಅವರನ್ನು ವೀರಪ್ಪನ್ ಅಪಹರಿಸಿದ ಅಂದು ಟಿವಿ ಮಾಧ್ಯಮಗಳು ಅಷ್ಟೊಂದು ಪ್ರಚಲಿತದಲ್ಲಿರಲಿಲ್ಲ. ಅಷ್ಟಾದರೂ ಅಣ್ಣಾರವರ ಅಪಹರಣ ನಾಡಿನಾದ್ಯಂತ ಕಾಡ್ಗಿಚ್ಚಿನಂತೆ ಹರಡಿತ್ತು. ಆ ಸಂದರ್ಭದಲ್ಲಿ ನಾನು ಕರ್ತವ್ಯ ನಿರ್ವಹಿಸುತ್ತಿರುವಾಗ ಅಭಿಮಾನಿಗಳ ಆಕ್ರೋಶ, ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಆ ಸಂದರ್ಭದಲ್ಲಿ ಡಾ.ರಾಜ್ ಅವರ ಸರಳ ಸಜ್ಜನಿಕೆ, ಸ್ವಭಾವದ ಬಗ್ಗೆ ಜನರಿಗೆ ತಿಳಿಸಿ ಹೇಳಿದಾಗ ಅಭಿಮಾನಿಗಳು ಶಾಂತರಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕಿ ಕಸ್ತೂರಿ ಪಾಟೀಲ, ರಾಜೇಶ್ವರಿ ದೇಶಪಾಂಡೆ, ವಿನಾಯಕ ದಂಡಗಿ, ರಾಮಚಂದ್ರ ಪೂಜಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕನ್ನಡ ಭಾಷಾಭಿಮಾನವನ್ನು ಬೆಳೆಸಿದವರು ಡಾ. ರಾಜ್ಕುಮಾರ್ - ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ